 ಜೀವನ -
1939ರ ನವೆಂಬರಿನಲ್ಲಿ ಆರಂಭವಾದ ಒಂದು ಕನ್ನಡ ಮಾಸಪತ್ರಿಕೆ. ಮೊದಲ ನಾಲ್ಕು ವರ್ಷ ಧಾರವಾಡದಿಂದ ಪ್ರಕಟವಾಗುತ್ತಿತ್ತು. ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ ಇವರು ಸಂಪಾದಕರಾಗಿದ್ದರು. ನಡುವೆ ಒಂದು ವರ್ಷ, 1942ರಲ್ಲಿ, ಪತ್ರಿಕೆ ತ್ರೈಮಾಸಿಕವಾಗಿ ಬರುತ್ತಿತ್ತು. 1944ರಲ್ಲಿ ಅದು ಬೆಂಗಳೂರಿಗೆ ವರ್ಗವಾಯಿತು. 1944ರ ಮೇ ತಿಂಗಳಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಸಂಪಾದಕತ್ವದಲ್ಲಿ ಅದು ಪ್ರಕಟವಾಗುತ್ತಿತ್ತು. 1965ರ ಜೂನ್‍ನಲ್ಲಿ ಕೆ.ಗೋಪಾಲಕೃಷ್ಣರಾಯರು ಅದರ ಸಂಪಾದಕರಾದರು. ಅವರು ತೀರಿಕೊಂಡಾಗ ಸಂಪಾದಕತ್ವವನ್ನು ಸಿದ್ದವನಹಳ್ಳಿ ಕೃಷ್ಣಶರ್ಮರು ವಹಿಸಿಕೊಂಡರು. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಈ ಅವಧಿಯಲ್ಲಿ ಪತ್ರಿಕೆ ಒಮ್ಮೊಮ್ಮೆ ಸಕಾಲಕ್ಕೆ ಬರುತ್ತಿರಲಿಲ್ಲ. ನಡು ನಡುವೆ ಒಂದೆರಡು ತಿಂಗಳು ಪ್ರಕಟವಾಗಲಿಲ್ಲ. ಜನವರಿ 1969ರಿಂದ ಹಂಪ ನಾಗರಾಜಯ್ಯ ಸಂಪಾದಕರಾದರು. ಈಗ ಪತ್ರಿಕೆಯ ಪ್ರಸಾರ ಒಂದು ಸಾವಿರಕ್ಕೂ ಹೆಚ್ಚಾಗಿದೆ. ಪತ್ರಿಕೆ ಆಗಾಗ ವಿಶೇಷಸಂಚಿಕೆಗಳನ್ನು ಹೊರತರುತ್ತಿದೆ. ಲೇಖಕರಿಗೆ ಆಗಾಗ ಸಂಭಾವನೆಯನ್ನೂ ಕೊಡುತ್ತಿದೆ. ಪತ್ರಿಕೆ ಮೊದಲು ಬೆಂಗಳೂರಿನ ಬಿ.ಬಿ.ಡಿ. ಪವರ್ ಪ್ರೆಸ್ಸಿನಲ್ಲೂ ಆಮೇಲೆ ಬೆಂಗಳೂರು ಪ್ರೆಸ್ಸಿನಲ್ಲೂ ಅಚ್ಚಾಗುತ್ತಿತ್ತು. ಅನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ.ಶ್ರೀ. ಅಚ್ಚುಕೂಟದಲ್ಲಿ ಹಲವು ವರ್ಷ ಮುದ್ರಣವಾಗುತ್ತಿತ್ತು. ಈಗ ನ್ಯೂ ಬೆಂಗಳೂರು ಪ್ರಿಂಟರ್ಸ್ ಮುದ್ರಣಾಲಯದಲ್ಲಿ ಅಚ್ಚಾಗುತ್ತಿದೆ. ಪ್ರಕಟಣೆಯ ಸ್ಥಳ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ. ಪ್ರಾರಂಭವಾದಂದಿನಿಂದಲೂ ಪತ್ರಿಕೆಯ ಆಕಾರ ಕ್ರೌನ್ ಅಷ್ಟದಳ. ವಾರ್ಷಿಕ ಚಂದಾ (ಸೆಪ್ಟೆಂಬರ್ 1975) ಒಂಬತ್ತು ರೂಪಾಯಿ. ರೋಮನ್ 12 ಪಾಯಿಂಟ್ ಅಕ್ಷರಗಳ ಎರಡು ಅಂಕಣಗಳಿರುತ್ತವೆ. ಸಾಹಿತ್ಯದಲ್ಲಿ ಒಳ್ಳೆಯದು ಬೆಳೆಯಬೇಕು, ಜನ ಒಳ್ಳೆಯವರಾಗಿ ಬಾಳಬೇಕು, ಜನಜೀವನದ ಕಂಠವಾಗಿ ಪತ್ರಿಕೆ ತನ್ನ ಮಾತನ್ನು ದಿಟ್ಟವಾಗಿ ಹೇಳಬೇಕು, ಅತ್ಯುಚ್ಛ ಸಾಹಿತ್ಯ ಸಂಸ್ಕøತಿಯ ಪರಿಪಕ್ವ ಫಲಗಳನ್ನು ಜನತೆಗೆ ನೀಡಬೇಕು ಎಂಬುದು ಸ್ಥೂಲವಾಗಿ ಪತ್ರಿಕೆಯ ಉದ್ದೇಶ. ಕವಿತೆ, ಕಥೆ, ವಿಮರ್ಶೆ, ಪ್ರಬಂಧ, ಪ್ರವಾಸಕಥನ, ಅನುವಾದ, ಕಿರುನಾಟಕ, ಪುಸ್ತಕ ಪರಿಚಯ ಮೊದಲಾದ ಸಾಹಿತ್ಯದ ಬರಹಗಳನ್ನಷ್ಟೇ ಪತ್ರಿಕೆ ಪ್ರಕಟಿಸುತ್ತ ಬಂದಿದೆ. ಪತ್ರಿಕೆ ಪ್ರತಿ ತಿಂಗಳ ಮೊದಲನೆಯ ತಾರೀಖಿಗೆ ಹೊರಬರುತ್ತದೆ. ಇದು ಅನೇಕ ಹೊಸ ಲೇಖಕರನ್ನು ಬೆಳಕಿಗೆ ತರಲು ಕಾರಣವಾಗಿದೆ.

	ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅದರ ಸಂಪಾದಕರಾಗಿದ್ದಾಗ ಅವರು ಬರೆಯುತ್ತಿದ್ದ ಸಂಪಾದಕೀಯ ಬರಹಗಳು ವೈಶಿಷ್ಟ್ಯಪೂರ್ಣವಾಗಿದ್ದುವು. ಪ್ರಚಲಿತ ವಿಚಾರಗಳನ್ನು ಕುರಿತ, ಪೂರ್ವಾಗ್ರಹವಿಲ್ಲದ ಉತ್ತಮ ಸಮೀಕ್ಷೆಗಳಿಗೆ ಮಾದರಿಗಳಾಗಿದ್ದುವು.
(ಎಚ್.ಪಿ.ಎನ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ